ಕಾಮಾಲೆ

ರಕ್ತದಲ್ಲಿ ಮಿತಿಮೀರಿದ ಬಿಲಿರುಬಿನ್ ಇದ್ದಾಗ ಉಂಟಾಗುವ ಒಂದು ರೋಗ ಲಕ್ಷಣ (ಜಾಂಡೀಸ್). ಕಣ್ಣು ಮತ್ತು ಚರ್ಮ ಹಳದಿ ಬಣ್ಣ ತಳೆಯುವುದರಿಂದ ಇದು ಸ್ಪಷ್ಟವಾಗಿ ಪ್ರಕಟವಾಗುವುದು. ಅನೇಕ ವೇಳೆ ರೋಗಿಗಿಂತ ಮೊದಲು ಆತನನ್ನು ನೋಡಿದ ಇತರರು ಈ ರೋಗವನ್ನು ಗುರುತಿಸುವುದುಂಟು. ಕೆಂಪು ರಕ್ತ ಕಣಗಳಲ್ಲಿನ ಹೀಮೋಗ್ಲೋಬಿನ್ ಕುಗ್ಗುವಿಕೆಯಿಂದ ಅಂದರೆ (ಬಲಹೀನಗೊಳ್ಳುವುದರಿಂದ) ಉಂಟಾಗುವ ಹಳದಿಯ ವರ್ಣದ್ರವ್ಯವಾದ ಬೈಲಿರುಬಿನ್ ಪಿತ್ತಜನಕಾಂಗದಿಂದ ಒಂದು ನಾಳದ ಮೂಲಕ ಹೊರಕ್ಕೆ ವಿಸರ್ಜಿತವಾಗುವುದು. ಮುಂದೆ ಹೇಳಿರುವ ಮೂರು ಕಾರಣಗಳಿಗೆ ಅನುಸಾರವಾಗಿ ಕಾಮಾಲೆ ರೋಗವನ್ನು ಮೂರು ಬಗೆಗಳಾಗಿ ವರ್ಗೀಕರಿಸಿದೆ: 1 ಹೀಮೋಗ್ಲೋಬಿನ್ನಿನ ಅತೀವ ಆರೋಗ್ಯಹೀನತೆಯಿಂದ ಬರುವುದು ಹೀಮೋಲಿಟಿಕ್ ಕಾಮಾಲೆ, 2 ಪಿತ್ತಜನಕಾಂಗಗಳಿಗೆ ಸಂಬಂಧಪಟ್ಟ ಕಾಯಿಲೆಯ ಪರಿಣಾಮವಾಗಿ ಪಿತ್ತರಸದ ವಿಸರ್ಜನೆಗೆ ಅಡಚಣೆಯುಂಟಾದಾಗ ಬರುವುದು. ಹಿಪೇಟಿಕ್ ಕಾಮಾಲೆ, 3 ಪಿತ್ತರಸನಾಳಕ್ಕೆ ತಡೆಯುಂಟಾಗಿ, ಹಿಂದಿನಿಂದ ಒತ್ತಡವಾಗಿ ರಕ್ತದಲ್ಲಿ ಹೆಚ್ಚು ಹೆಚ್ಚಾಗಿ ಬೈಲಿರುಬಿನ್ನಿನ ಸಂಗ್ರಹಣೆ ಆದಾಗ ಬರುವುದು ತಡೆ (ಅಬ್‍ಸ್ಟ್ರಕ್ಟಿವ್) ಕಾಮಾಲೆ.

ಮೊದಲನೆಯ ಬಗೆಯಲ್ಲಿ ರೋಗಿಯ ರಕ್ತದಲ್ಲಿ ಬೈಲಿರುಬಿನ್ ಪ್ರಮಾಣ ಅಧಿಕವಾಗುವುದು. ಎರಡನೆಯ ಬಗೆಯದಾದ ಹಿಪೇಟಿಕ್ ಕಾಮಾಲೆ ಸರ್ವೇ ಸಾಮಾನ್ಯ. ಇದು ಸೋಂಕು ರೋಗ. ಒಂದು ಬಗೆಯ ಸೂಕ್ಷ್ಮ ವಿಷಕೀಟಾಣುಗಳಿಂದ ಇದು ಹರಡುತ್ತದೆ. ತಡೆ ಕಾಮಾಲೆಯಲ್ಲಿ ಹೆಸರೇ ಸೂಚಿಸುವಂತೆ ಪಿತ್ತರಸದ ವಿಸರ್ಜನೆಗೆ ತಡೆಯುಂಟಾಗುವುದು. ಆದ್ದರಿಂದ ಪಿತ್ತರಸವೂ ಅದರೊಡನೆ ಸೇರಿರುವ ಮತ್ತಿತರ ಪಿತ್ತಜನಾಕಾಂಗದ ರಸಗಳೂ ರಕ್ತದಲ್ಲಿಯೇ ಉಳಿಯುತ್ತವೆ. ಈ ತಡೆಗೆ ಪಿತ್ತನಾಳದ ಅಕ್ಕಪಕ್ಕದ ನಿರ್ನಾಳ ಗಂಟಿನ ಒತ್ತಡವೂ ಕಾರಣ.

ರೋಗದ ಚಿಹ್ನೆಗಳು ಮತ್ತು ವೇದನೆಗಳು : ರೋಗಿಯ ಚರ್ಮ, ಕಣ್ಣಿನ ಆದ್ರ್ರಚರ್ಮ, ಬೆವರು ಮತ್ತು ಮೂತ್ರ ಹಳದಿ ಬಣ್ಣಕ್ಕೆ ತಿರುಗುತ್ತವೆ. ಪಿತ್ತರಸದ ಲವಣಗಳು ಸಹ ರಕ್ತದಲ್ಲಿ ಸಂಗ್ರಹಿತವಾಗುತ್ತ ಹೋದಲ್ಲಿ ರೋಗಿಗೆ ಮೈ ಇಡೀ ತುರಿಕೆಯ ಅನುಭವವಾಗುವುದು. ರೋಗ ಪಿತ್ತಜನಕಾಂಗಕ್ಕೆ ಸಂಬಂಧಪಟ್ಟಲ್ಲಿ ಕೆ ಜೀವಾತುವಿನ ಅಭಾವದಿಂದ, ಮೂಗು ಮತ್ತು ವಸಡುಗಳಿಂದ ರಕ್ತಸ್ರಾವವಾಗುವುದು.

(ಕೆ.ಎಸ್.ಎಸ್.ಎಚ್.)